ದುಃಖಿಸುತ್ತಿವೆ ಬಾಗಿಲುಗಳು
ಕಿಟಕಿಗಳು ಅಳು ತೆರೆದಿಟ್ಟಿವೆ
ಎದೆ ಜಗಲಿಯೆತ್ತರ ನಿಂತಿರುವ
ವೇದನಾ ಪ್ರವಾಹದೆದುರು
ನಗೆಗವಾಕ್ಷಿಗಳನ್ನು ನಿಲ್ಲಿಸಲಾಗಿದೆ
ಅಳತೆ ಮೀರಿವೆ ನಡತೆ – ಹೊಸ್ತಿಲುಗಳು.
ಹೃದಯದೊಳಗೇ
ಕವಿತೆ ಚೂರುಗಳು ಕುದಿಯುತ್ತಿವೆ.
ಮೇಲೆ – ಗೆಳೆಯರ ಫ್ಯಾನು
ತಣ್ಣಗೆ ಬೀಸುವುದು
ಹೊರಗೆ – ಕಸಿವಿಸಿಗೆ ಸಿಕ್ಕಿ
ಹೂಗಳು ಅರಳುವುವು
ಅಲ್ಲಲ್ಲಿ – ಲಘುಮಾತುಗಳ ತೆಳುಗಾಳಿಗೆ
ನಂಬುಗೆಯ ಕರ್ಟನುಗಳೇ ಕಂಪಿಸುವುವು…
ಇಲ್ಲಿ – ಕಕ್ಕಾವಿಕ್ಕಿಯಾಗಿದೆ ಹಾಸಿಗೆ
ಗಲಿಬಿಲಿಗೆ ಕೆದರಿದೆ ಹೊದಿಕೆ
ಇಲ್ಲಿಯೇ – ಕೆಡುಗನಸುಗಳನ್ನು ಕೊಟ್ಟಿವೆ
ದುಷ್ಟ ದಿಂಬುಗಳು.
ಓ… ಕೇಳಿ,
ತಾಳುವ ಗಟ್ಟಿಗತನವಿದೆಯೆಂದು
ಬಾಳಿದ್ದೇನೆ… ಈ ಇಲ್ಲಿ
ಏನೇ ಬರಲಿ,
ಬಂದದ್ದನ್ನು ಸಿಂಗರಿಸುವೆ
ಇದ್ದವುಗಳನ್ನು ಸರಿಪಡಿಸುವೆ.
ನನಗೆ ಸಂತೈಸುವ ಬೆರಳುಗಳಿವೆ.
......................... ೨೭-೧-೮೬ ದಾವಣಗೆರೆ