ನಾನು ಬದಲಾಗಿದ್ದೇನೆ.
ತೆಂಗಿನಗರಿಯಿಂದ ಗಿರಗಿಟ್ಟು ಮಾಡಿ ತಿರುಗಿಸಿದ ದಿನಗಳಲ್ಲಿ
ಕವೆಕೋಲಿನಿಂದ ಪೀಠವನ್ನು ಹಿಡಿದ ಕ್ಷಣಗಳಲ್ಲಿ
ದಿನಕ್ಕೊಂದು ಬಳಪವೆಣಿಸಿ ಸಂದಾಯ ಮಾಡಿದ ತರಗತಿಯಲ್ಲಿ
ನಾನು ಹುಡುಗನಾಗಿದ್ದೆ ಮತ್ತು ಮುಗ್ಧನಾಗಿದ್ದೆ
ಈಗ ಅದೇ ರೀತಿ ಹುಡುಗರನ್ನು ನೋಡುತ್ತೇನೆ
ಮುಗ್ಧ ಮಕ್ಕಳನ್ನು ಮೆಚ್ಚುಗೆಯಿಂದ ಗಮನಿಸುತ್ತೇನೆ.
ದೊಣ್ಣೆಕೋಲು ಟೈಟನ್ ಪೆನ್ನು ಮತ್ತು ಪೂಜೆಗೊಂದು ಪುಟ್ಟ
ಕಿಟ್ ಮಾರಾಟ ಮಾಡಿ ಬದನೇಕಾಯಿ ಬದುವಿನಲ್ಲಿ
ಶಿವರಾತ್ರಿಯ ಕಗ್ಗತ್ತಲನ್ನು ಮಾತನಾಡಿಸಿ ಅಜ್ಜನ ಜತೆ ಗೋಧಿ ರೊಟ್ಟಿ
ತಿಂದಂಥ ಹುಡುಗನಾಗಿದ್ದೆ ನಾನು ಮುಗ್ಧನಾಗಿದ್ದೆ.
ಈಗ ಅದೇ ವಸ್ತುಗಳನ್ನು ಶೋರೂಮಿನಲ್ಲಿ ಕಾಣುತ್ತೇನೆ.
ನನ್ನ ಹಳೆ ಊರುಗಳನ್ನು ಮೆಚ್ಚುಗೆಯಿಂದ ನೋಡುತ್ತೇನೆ.
ವರ್ಷಕ್ಕೊಂದು ಮನೆ ಬಲ್ಬು ಲಾಟೀನು ಅಥವಾ ನಲ್ವತ್ತು
ವ್ಯಾಟಿನ ಲ್ಯಾಂಪು. ಅಡಿಕೆ ತೋಟ ಕಾಫಿ ಕಿತ್ತಲೆ ಕೊನೆಗೆ
ತೆಂಗಿನ ತೋಪು. ನೀರು ಸರಬರಾಜಿನಲ್ಲಿ ವೈವಿಧ್ಯವಿತ್ತು
ಅಪ್ಪನ ಜತೆ ಓಡಾಡಿದ್ದೆ ; ಮುಗ್ಧನಾಗಿದ್ದೆ.
ಈಗ ಅದೇ ಅಪ್ಪ ಕ್ಷೇಮ ಸಮಾಚಾರ ಕೇಳುತ್ತಾನೆ.
ಶಿವಮೊಗ್ಗದಲ್ಲಿ ಒಬ್ಬಿಬ್ಬ ಕಾರ್ಮಿಕ ಮುಗ್ಧನಗು ಬೀರುತ್ತಾನೆ.
ಜವಾಬ್ದಾರಿ ಹೊತ್ತವರು ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು
ಊರೂರು ತಿರುಗಿದರು ; ಸೂರಿನ ಕೆಳಗೆ ಚಳಿಕಿತ್ತರು
ಪಾತ್ರೆಪಗಡೆಗಳನ್ನು ಕೊಂಡರು ; ದೂರಿದರು – ಸುಖವನ್ನರಸಿಕೊಂಡು
ಈಗ ಅವೇ ಊರು ಮನೆ ಅಂಗಳಗಳಲ್ಲಿ ಬೇರೆ ಜನ
ಅಂಗಡಿ ಹೂವು ಬದಲಾದ ಲೈಟುಕಂಬ – ನಾನು ಇವತ್ತಿಗೂ ಮುಗ್ಧ.
ನಾನು ಹೇಗೆ ಈ ವಾತಾವರಣವನ್ನು ಬಳಸಿಕೊಂಡೆ ಎಲ್ಲಿ ಈ
ಸೌಭಾಗ್ಯವಂತರ ಅನುಭವವನ್ನು ಮನಸ್ಸಿಗೆ ತೂರಿಸಿಕೊಂಡೆ ಯಾವಾಗ
ಹೆಜ್ಜೆ ಹೆಜ್ಜೆ ನಡೆದೆ – ಎಲ್ಲವೂ ಕಾಲಕ್ರಮೇಣ ಕರಗುತ್ತಿವೆ.
ನಾನು ಹುಡುಗ – ಮುಗ್ಧ ಹುಡುಗನಾಗಿದ್ದೇನೆಂಬುದಷ್ಟೆ ಉಳಿಯುತ್ತಿದೆ.
ಈಗ ನಾನು ಸ್ವಲ್ಪ ಹುಡುಗುತನ – ಮುಗ್ಧತೆಯನ್ನು ಮರೆತು
ಕಾಂಕ್ರೀಟು ನಾಡಿನಲ್ಲಿ ಹೆಜ್ಜೆಯೂರಿದ್ದೇನ&
amp;#3
270;.
ನಾನು ಬದಲಾಗಿದ್ದೇನೆ.