ಆಪ್ಟಿಮಿಸಮ್

ಬೆರಳುಗಳ ತಟ್ಟದಿರು ಹುಡುಗಿ
ನಾನು ನಡುಗುವೆ ನಿನ್ನ ಸ್ಪರ್ಶಕ್ಕೆ
ಕಣ್ಣುಗಳ ಕೂಡಿಸದಿರು ಕಡುಸಂಜೆ
ನಾನು ನಡುಗುವೆ ನಿನ್ನ ಪ್ರೀತಿಗೆ
ಅಂಗೈ ಹಿಡಿದು ಬಿಸಿಯೇರಿದಂತೆ
ನಾನು ನಡುಗುವೆ ಕಣೇ ನಿನ್ನ
ಹಣೆಮುಟ್ಟಿ ಹೇಳುವೆ ಕೇಳು
ನಾನು ನಡುಗುವೆ ನಿನ್ನ ಹಿತಕ್ಕೆ

ನನ್ನ ಈ ಹೆದರಿಕೆಗೆ
ದಿನಮಾನಗಳು
ಬೆದರೋ ಹಕ್ಕಿಗಳು, ಅಳುವ ಹೃದಯಗಳು
ದಿಕ್ಕಿಲ್ಲದೆ ಅದುರುವ ಹಣೆಗೆರೆಗಳು
ಕಾರಣ ಎಂಬ ಮಾತಿದೆ.
ನಿಜವಿರಬಹುದು.

ನಿನ್ನ ಈ ಪ್ರೀತಿಗೆ
ಸುಖದ ನೆನಪುಗಳು
ದುಃಖದ ದರಿದ್ರ ಕ್ಷಣಗಳು
ಭಾವುಕತೆಯ ಬಿಂದುಗಳು
ಬರದ ಗಳಿಗೆಗಳು
ಕಾರಣ ಎಂಬ ಮಾತೂ
ನಿಜ.

ಗಲ್ಲ ತಟ್ಟಿ ಹೇಳುವೆ ಕಣೇ
ಈ ಪ್ರೀತಿ-ಹೆದರಿಕೆ-ತಲ್ಲಣ
ಎಲ್ಲ ಹೇಳುವುದಿಷ್ಟೆ :

ಬಾರೆ ,
ಹೆದರಿಕೆಯನ್ನು
ಪ್ರೀತಿಸೋಣ.
ಬೆದರಿಕೆಗೆ
ಮುತ್ತಿಡೋಣ.

ತುಟಿ ಹೀರಿದ್ದೆ
ಬದುಕು.

Leave a Reply

Your email address will not be published. Required fields are marked *