ನಿನಗಾಗಿ ಉಡುಗೊರೆಯ ತಂದಿರುವೆ ನೋಡೇ
ತೆಗೆದುಕೋ ನನ್ನನ್ನೆ ಪೂರ್ಣವಾಗಿ
ಸುಖಮಜಲುಗಳ ನಿನಗೆ ತೋರಿಸುವೆ ತೆರೆದರೆ
ಪಡೆದುಕೋ ನನ್ನನ್ನೆ ಪೂರ್ಣವಾಗಿ.
ಗತನೆನಪುಗಳ ಭಗ್ನ ಗೋಡೆಗಳ ಮರೆತುಬಿಡು
ತೆಗೆದುಕೋ ನನ್ನನ್ನೆ ಪೂರ್ಣವಾಗಿ
ಹಿತ ರಾತ್ರಿಗಳು , ನವಿರು ಹಗಲುಗಳು ಅರಳಲಿವೆ
ಪಡೆದುಕೋ ನನ್ನನ್ನೆ ಪೂರ್ಣವಾಗಿ.
ನಮ್ಮ ಸ್ನೇಹದ ನೂರು ಗಳಿಗೆಗಳು ಕಾಯುತಿವೆ
ತೆಗೆದುಕೋ ನನ್ನನ್ನೆ ಪೂರ್ಣವಾಗಿ.
ನಿನ್ನೊಳಗೆ ಹೊರಗೆ ಆವರಿಸಿರುವೆ ನಾನೇ
ಪಡೆದುಕೋ ನನ್ನನ್ನೆ ಪೂರ್ಣವಾಗಿ.
ರೆಪ್ಪೆ ತೆರೆದರೆ ದಾರಿ, ಜತೆಗಾರ ನಾನೇ
ತೆಗೆದುಕೋ ನನ್ನನ್ನೆ ಪೂರ್ಣವಾಗಿ.
ಕಣ್ಣು ಮುಚ್ಚಿದ ಮೇಲೆ ಕಾಣೊ ಕನಸೂ ನಾನೆ
ಪಡೆದುಕೋ ನನ್ನನ್ನೆ ಪೂರ್ಣವಾಗಿ.
ನಾವು ನಾವೇ ಆದ ಖುಷಿಯ ಹರಹೇ ನಾನು
ತೆಗೆದುಕೋ ನನ್ನನ್ನೆ ಪೂರ್ಣವಾಗಿ.
ನೀನು ಹೊಳೆ, ನಾನೇ ದಂಡೆ ನಿಜ
ಪಡೆದುಕೋ ನನ್ನನ್ನೆ ಪೂರ್ಣವಾಗಿ.
ಬರಿಯ ಮಾತುಗಳಲ್ಲಿ ಕರಗಿಹೋಗದ ಹಾಗೆ
ಪಡೆದುಕೋ ನನ್ನನ್ನೆ ಪೂರ್ಣವಾಗಿ.
ಬದುಕಿನಂಗಳದಲ್ಲಿ ನೆಟ್ಟುಬಿಡು ನನ್ನ
ಬೆಳೆದುಕೋ ನನ್ನನ್ನೆ ಪೂರ್ಣವಾಗಿ.