ಎಲ್ಲಿರಬಹುದು ನಮ್ಮ ಸುರಸುಂದರಿಯರು
ಎಲ್ಲಿರಬಹುದು ನಮ್ಮ ಸುರಸುಂದರಿಯರು
ಐಶ್ವರ್ಯ ಮತ್ತು ಸುಸ್ಮಿತಾ
ಕಿರೀಟ ತೆಗೆದಿಟ್ಟು ಭುಜಕೀರ್ತಿ ಬಿಚ್ಚಿಟ್ಟು
ಸೇವಾರ್ಥ ಹೊರಟಾಯಿತಾ ?
ಹೋಗಿರಬಹುದೆ ಇನ್ನೊಂದು ಅನಾಥಾಲಯಕ್ಕೆ
ಬರೀ ಎರಡೇ ತಾಸು ತಡವಾಗಿ ?
ಅಥವಾ ಮುನ್ನುಗ್ಗಿರಬಹುದೆ ಮಂಡೇಲಾ ಮನೆಗೆ
ವಿಶ್ವಭ್ರಾತೃತ್ವದ ಸಿಹಿ ಮುತ್ತಿಗಾಗಿ ?
“ಸ್ಪಾಸ್ಟಿಕ್ಸ್ ಸೊಸೈಟಿಗೆ ಬರಲಿಲ್ಲ ದಾನ''
ಬಚ್ಚನ್ನಿಗೆ ಖಠು ಕಾಗದ ಬರೆಯುತ್ತಿರಬಹುದೆ ?
“ಕುರೂಪಿಗಳಿಗೂ ಕೊಡಿ ಮೀಸಲಾತಿ''
ಅಟಲ್‌ಜಿಗೆ ಫೋನಾಯಿಸುತ್ತಿರಬಹುದೆ ?
ಚೆನ್ನೈನಲ್ಲಿ ಚುಡಾವಣೆಗೆ ಬಲಿಯಾದ ಹುಡುಗಿ
ತಾಯಿಗೆ ಸಾಂತ್ವನ ಹೇಳುತ್ತಿರಬಹುದೆ ?
ಜಯಲಲಿತಾ, ಮಮತಾ, ಸುಷ್ಮಾ, ಸೋನಿಯಾ
ರಾಬ್ಡಿಯರನ್ನು ಒಗ್ಗೂಡಿಸುತ್ತಿರಬಹುದೆ ?
ನನಗಂತೂ ಗೊತ್ತು, ಸುಸ್ಮಿತಾ ಸೌಂದರ್ಯ ಸಾಬೂನಿಗಾಗಿ
ನಿಲುವಂಗಿಯಲ್ಲಿ ವಾಕಿಂಗು ಹೋಗಿದ್ದಳು.
ನೇತ್ರದಾನದ ಜಾಹೀರಾತಿಗಾಗಿ ಕೊಂಚ ತೆರೆದಿದ್ದವು
ನಮ್ಮ ಐಶ್ವರ್ಯಾಳ ಕಣ್ಣುಗಳು.
ಥೇಟರ್‌ನಲ್ಲಿ ಜನ ಭೇಷ್ ಎಂದಿದ್ದರಂತೆ
ಐಶ್ವರ್ಯಾಳ ಸಿನಿಮೀಯ ನಟನೆಗೆ
ಮೊನ್ನೆ ಕಂಡಿದ್ದೇನೆ ಕುಣಿಯುತ್ತಿದ್ದಳು ಸುಸ್ಮಿತಾ
`ಅಂಗಾರೆ' ಸಿನಿಮಾದೊಳಗೆ.
ಏನೇ ಹೇಳಿ, ಈ ಸುಂದರಿಯರು ಇರಬೇಕು ಇಲ್ಲಿ
ಎಷ್ಟೆಂದರೂ ಭಾರತದ ಆಸ್ತಿ ಮಾತ್ರ
ಕ್ವಿಜ್ಜುಗಳಲ್ಲಿ ಹಾಗೆ ಉದುರಿಸಬಾರದಿತ್ತು
ನುಡಿಮುತ್ತುಗಳ ಬೆಲೆಯೂ ಜಾಸ್ತಿ.
ಎಲ್ಲಾದರೂ ಇರುತ್ತಾರೆ, ಎಂತಾದರೂ ಇರುತ್ತಾರೆ
ಇವರು ಎಂದೆಂದಿಗೂ ಸುಂದರಿಯರು.
ತುಟಿಮೀರಿ ಹೊರಬಿದ್ದ ಪದಗಳಂತರದಲ್ಲಿ
ಅರ್ಥಗಳ ಠಾವುಂಟು ಎಂದರಿಯರು !
ಸುಸ್ಮಿತಾ-ಐಶ್ವರ್ಯ ಇಬ್ಬರೇ ಎನ್ನದಿರಿ
ಬರಬಹುದು ಮೂರನೆಯ ಸುರಸುಂದರಿ.
ಯಾರಿಗೂ ಬೇಜಾರು ಆಗಬಾರದು ನೋಡಿ
ಹೊಸ ಮಾತು ಮಿಂಚಲಿದೆ, ಹೊಸ ಸೀನರಿ !