ಡೊಂಕು ಮನಸ್ಸಿನ ಮಾನವರೇ
ಡೊಂಕು ಮನಸ್ಸಿನ ಮಾನವರೇ
ನೀವೇನೇನಬ್ಬರ ನಡೆಸಿದಿರಿ ?
ಹುಟ್ಟಿದ ಹಾಗೇ ಬದುಕಲಾಗದೇ
ಸುಮ್ಮನೆ ತಲೆಯನು ತುರಿಸಿದಿರಿ
ನೀಟು ಗೀರುಗಳು ಬಳುಕುತ್ತಿದ್ದರೆ
ಅಕ್ಷರಗಳ ಪಡೆ ಪಡೆಯುವಿರಿ
ಕೊಂಬು ಕಹಳೆಗಳು ಕೂಗುತ್ತಿದ್ದರೆ
ಕಾಕಾಕೀಕಿ ಬರೆಯುವಿರಿ
ಕೆರೆದಂಡೆಯಲಿ ಕೋಣಗಳಿದ್ದರೆ
`ಕಮಲ' `ಬಸವ'ರನು ಕರೆಯುವಿರಿ.
ಕಣ್ಣಳತೆಯಲಿ ಹಣ್ಣುಗಳಿದ್ದರೆ
`ಬಾಬಾ ಗಿಳಿಯೇ' ರಮಿಸುವಿರಿ
ಸಿಟಿಬಸ್ಸುಗಳು ಸಿಗದಿದ್ದಾಗ
ಟಿಕ್‌ಟಿಕ್‌ಟಿಕ್‌ಟಿಕ್ ತೊದಲುವಿರಿ.
ಕೊಳಚೆಗೆ ಹುಟ್ಟಿದ ಸೊಳ್ಳೆ ಕಡಿದಾಗ
ಅಜ್ಜನ ಕಂಬಳಿ ನೆನೆಯುವಿರಿ.
ಬಾಡಿಗೆ ಮನೆಯನು ನೋಡಲು ಹೋದರೆ
ಹಾವಿನ ಠಾವಿದು ಎನ್ನುವಿರಿ
ಸೈಟೊಂದಿದ್ದರೆ ಸಾಲವು ದೊರೆತರೆ
ಹೂವಿನ ಹೊಸನಗು ಬೀರುವಿರಿ.
ಹಳೆ ಮಾಡೆಲ್ಲಿನ ಮಾರುತಿ ಸಿಕ್ಕರೆ
`ಅಜ್ಜನ ಕೋಲಿದು !' ಕಿರುಚುವಿರಿ
ರೇಸುಟ್ರಾಕಿನಲ್ಲಿ ಕತ್ತೆ ಗೆದ್ದರೂ
`ನನ್ನಯ ಕುದುರೆ' ಎನ್ನುವಿರಿ
ಟೀಯೇಡೀಯೆ ಲೆಕ್ಕಗಳಿಗೆ
ಮಗ್ಗಿಕೋಷ್ಟಕವ ಹುಡುಕುವಿರಿ
ಸೀಮೆಯೆಣ್ಣೆ ಸಕ್ಕರೆಯಿದ್ದರೆ
ಮಿಠಾಯಿ ಮಾಡಿ ಮೆಲ್ಲುವಿರಿ
ಚಿಟ್‌ಫಂಡ್ ಕಂಪನಿ ದಿವಾಳಿಯಾದರೆ
ಮೊದಲನೆ ಪಾಠ ಕಲಿಯುವಿರಿ
ಎರಡನೆ ಪಾಠ ಮೂರನೆ ಪಾಠ
ನಾಲ್ಕನೆ ಪಾಠ ಓದುವಿರಿ
ನಾಚುವ ಹುಡುಗರು ನಡೆಯುತ್ತಿದ್ದರೆ
ಗಾಂಧಿತಾತನ ನೆನಸುವಿರಿ
ಬೀಚುಗಳಲ್ಲಿ ಬಾರುಗಳಲ್ಲಿ
ಮಾನಮರ್‍ಯಾದೆ ಕಳೆಯುವಿರಿ.
ದುಃಖಿ ದರಿದ್ರರು ಎದುರಿಗೆ ಬಂದರೆ
ಸಮಾಜವಾದವ ಜಡಿಯುವಿರಿ
ಶಿವರಾತ್ರಿಯಲಿ ಸಿಗರೇಟಿನ ಜತೆ
ಕಲ್ಲಂಗಡಿಯನು ಕೊಯ್ಯುವಿರಿ
ಬೆಪ್ಪಗೆ ಕೂಡುವ ಜನಗಣವಿದ್ದರೆ
ಮೋಕ್ಷ ಸಿದ್ಧಾಂತ ಕೊರೆಯುವಿರಿ.
ಕೊನೆಯ ದಿನಗಳು ಕೇಕೆಹಾಕಿದರೆ
ಸುದೀರ್ಘ ಮೌನವ ತಾಳುವಿರಿ.