ಕವಿ ಗೆಳೆಯನ ಸಲಹೆಗಳು
೧೯೯೧
ಬೆಂಗಳೂರು
ಕವಿ ಹೃದಯ ಒಣಗಬಾರದು ಎಂದ ಕವಿ ಗೆಳೆಯ
ಕೊಯ್ಯಬಾರದು ಹೂವ ಬೈಯಬಾರದು ಮಳೆಯ
ಒದೆಯಬಾರದು ನಿಲ್ಲಲಿಕ್ಕೆ ಜಾಗಕೊಟ್ಟ ಇಳೆಯ
ಚಾ ಕುದಿಸಬಾರದು ಹೆಚ್ಚು – ಹದ ಕಳೆವ ಹಾಗೆ
ನಿದ್ದೆಗಾಗಿ ಕನವರಿಸಬಾರದು ಹೊತ್ತಿಗಾಗಿ ಕಾಯಬಾರದು
ಹೊದೆಯಬಾರದು ಬೆಚ್ಚಗೆ ಗುಡಾರವನ್ನು ಮಧ್ಯಾಹ್ನ
ತಿರುಗಬಾರದು ಹುಡುಗಿಯರ ಜತೆಗೆ ಜನನಿಬಿಡ ರಸ್ತೆಗಳಲ್ಲಿ
ಎಂದ ಕವಿಗೆಳೆಯ ಹೇಳುತ್ತಾನೆ ನನ್ನೆರಡೂ ಕಿವಿಗಳಲ್ಲಿ
ಉಸುರಿದ್ದಾನೆ – ಹೊರಬಾರದೆಂದಿಗೂ ಹೆತ್ತವರ ಋಣವ
ದುಃಖಿಸದಿರೆಂದಿಗೂ ಸ್ನೇಹಿತರು ವಿದಾಯ ಹೇಳಿ ನಡೆದಾಗ
ರೆಪ್ಪೆಯಾಡಿಸದಿರು ಎದೆಗತ್ತಲಿನ ಹೊಸ ಹೆದರಿಕೆಯಲ್ಲಿ
ಕವಿಗೆಳೆಯ ಸೂಚಿಸಿದ್ದಾನೆ ಸುಖಿಸಬಾರದು ಕ್ಷಣ ಹಗುರವಾದಾಗ
ಬಳಸಬಾರದು ನಿಶ್ಶಬ್ದ – ಅಳುವಾಗ ಅಥವಾ ನಗುವಾಗ ಶಬ್ದ
ಬೆಳೆಸಬಾರದು ಮೋಹದಂಚಿಗೆ ಮಾತು ತಲುಪಿದಾಗ
ಕೊನೆಯದಾಗಿ – ತೋರಬಾರದು ತನ್ನೊಳಗೇನೆ ಕರುಣೆ, ಕಳವಳ
ಬೇಕಿದ್ದರೆ ನಿಂತು ನೋಡಬಹುದು ಲೋಕವನ್ನು
ಬೇಕಿದ್ದರೆ ಕುಳಿತು ಬರೆಯಬಹುದು ಕವನವನ್ನು
ಬೇಕಿದ್ದರೆ ಗುರುತಿಟ್ಟುಕೊಳ್ಳಬಹುದು ಮಾಡಬಾರದ್ದನ್ನು
ಹೌದು ಮಾರಾಯ ಎಂದಿದ್ದಾನೆ ಕವಿಗೆಳೆಯ
ಕೊಯ್ಯಬಾರದು ಇಳೆಯ ಬೈಯಬಾರದು ಹೂವ
ಒದೆಯಬಾರದು ತೋಯಿಸಲು ಹಿತವಾಗಿ ಸುರಿವ ಮಳೆಯ
ಮುಖ್ಯ
ಒಣಗಬಾರದು ನಿನ್ನ ಕವಿ ಹೃದಯ.