ಸುಕುಮಾರನ ನೆನಪುಗಳು
೨೯-೧೦-೯೪
ಮಂಗಳೂರು
ಗೆಳತಿಯರು ನೆನಪಾದರು
ಅರಾಮಖುರ್ಚಿ ಎದೆಗಟ್ಟಿಯಲ್ಲಿ
ಪ್ರೇಮಪ್ರಬಂಧ ಮಂಡಿಸಿ
ಕಾಮದರಗಿಣಿ ಚರ್ಚೆ ಗೆದ್ದವರು
ಹಣೆಯಲ್ಲಿ ಸ್ವಾತಂತ್ರ್ಯ ಘೋಷಿಸಿ
ನೆನಪನ್ನು ಶೋಷಿಸಿದರು.
ಸಾಯಬೇಡ ಎಂದವರು ಐವತ್ತರ ನೋಟು
ರವಾನಿಸಿ ಸಿಗರೇಟೆಳೆಯದಿರೆಂದು ಕಣ್ಣೀರಿಟ್ಟು ಕೂಗಿದರು
ಮೊನ್ನೆ ಮೊನ್ನೆ.
ಮತ್ತೆ ಮೇಘದ ಹಾಗೆ ಆಕಾಶಕ್ಕೆ ಚಿಮ್ಮಿ
ಘನವಾಗಿ ಮಳೆಯಾಗಿ ಮಾರ್ಪಟ್ಟು
ಭೂತ ಬಿಸಿಲಾಗಿ ರಾಚಿದ ಈ
ಗಳಿಗೆ ನೆನಪಾದರು.
ಸಿಮೆಂಟಿನಂತೆ ಬಣ್ಣ ಬದಲಾಗದಂತೆ
ಸೂಕ್ಷ್ಮತೆಯ ಸ್ನೇಹ ಪರದೆಯ ನೇಯ್ದು
ಹೂಡುಗಣ್ಣುಗಳಲ್ಲಿ ತುಟಿ ಬೇಟೆಯಾಡಿದರು
ಎದೆ ಚೆಲ್ಲಿ ಹೊರಳಿದರು ಹುದುಗಿದರು
ಹೂವರಳಿ ನಕ್ಕಂತೆ ನೆನಪಾದರು.
ಕಾಲುದಾಟಿ ಬಾಗಿಲಾಚೆಗೆ ಹೋದರೆ ಬಯ್ದವರು
ದಿನಾರಾತ್ರಿ ಕರೆದು ಕರೆದು ಸೋತರು
ಪ್ರೀತಿ ತುಷ್ಟೀಕರಣ ದ್ವೇಷ ಭಾಷ್ಪೀಕರಣ
ಪ್ರಯೋಗಗಳ ಫಲಿತಾಂಶ ಕಾಯುತ್ತ
ಕೂತರು.
ನನ್ನ ಗೆಳೆತಿಯರೆಲ್ಲ ನೆನಪಾದರು
ಎದೆಯಾಂತರಾಳಕ್ಕೆ ಧಾವಿಸಿ ಧಿಗ್ಗನೆ ಹೊತ್ತಿ
ಹಠಾತ್ತನೆ ಜಾರಿದರವರು
ಮೆದುಳು ಕೋಶಗಳಲ್ಲಿ ಗತವಾದರು.
*
ಆಹಾ… ಸುಕುಮಾರ ಏನಂಥ ಸಮಾಚಾರ
ನೆನಪಾಗೋದು ಹೆಚ್ಚಾ?
ನಿನ್ನೆ ಹುಟ್ಟಿದ್ದನ್ನೇ ಮರೆತ ಸೂರ್ಯನಿಗಿಂತ
ಮೊನ್ನೆ ಕರಗಿದ್ದನ್ನೇ ಮರೆತ ಚಂದ್ರನಿಗಿಂತ,
ಹೋಗಲೇ.