ಅಸ್ವಸ್ಥನೆದೆ
೧೯೮೭ ಬೆಂಗಳೂರು
ಅಸ್ವಸ್ಥನೆದೆ ತುಂಬು ಮಳೆ ತರದ ಮೋಡಗಳು
ಹಣೆಯ ರೇಖೆಗಳಲ್ಲಿ ಅರೆಗೊಂದಲ
ಅಸ್ವಸ್ಥನೆದೆ ತುಂಬ ಬಿಸಿಲೇರಿದಾಕಾಶ
ಮತ್ತೆ ಬದುಕಿನ ಮಾತು ಕುದುರದಲ್ಲ?
ಅಸ್ವಸ್ಥನೆದೆ ತುಂಬ ಕನಸು ದಿಕ್ಕಾಪಾಲು
ಮನದ ಟೀಕಾಕಾರ ಪ್ರಥಮ ಡೈರಿ
ಅಸ್ವಸ್ಥನೆದೆ ತುಂಬ ಅಪಶಕುನಗಳ ಡೊಗರು
ಎಂದಾದರಿದ್ದೀತೆ ಅವಳ ಠುಮರಿ?
ಅಸ್ವಸ್ಥನೆದೆ ತುಂಬ ಡೊಂಕು ವಿಶ್ವಾಸಗಳು
ಅಂಕೆ ತಪ್ಪಿದ ಅಳುಕು, ಅಸಮಗಾನ
ಅಸ್ವಸ್ಥನೆದೆ ತುಂಬ ಅನಿಮಿತ್ತ ನಾಜೂಕು
ನೂರಾರು ಸಿದ್ಧಾಂತಗಳ ಛೇದನ
ಅಸ್ವಸ್ಥನೆದೆ ತುಂಬ ಅಚಲ ಬಿಗುಮಾನಗಳು
ಅನುಮಾನವೇ ಅಲ್ಲಿ ಮುಖ್ಯಮಂತ್ರಿ
ಅಸ್ವಸ್ಥನೆದೆ ತುಂಬ ಅಣುಕು ಪ್ರತ್ಯುಕ್ತಿಗಳು
ಅಸ್ವಸ್ಥ ತನ್ನೊಳಗೆ ಕುಶಲ ತಂತ್ರಿ
ಅಸ್ವಸ್ಥನೆದೆ ತುಂಬ ಅರ್ಧ ಕವನಗಳೇ
ಉಳಿದರ್ಧದಲ್ಲಾತ ಸೇರಿಬಿಡುವ
ಅಸ್ವಸ್ಥನೆದೆ ತುಂಬ ಅಪರಿಚಿತ ದಾರಿಗಳು
ಅಲ್ಲಿ ಅವನೇ ಪೂರ್ಣ ಜಾರಿಬಿಡುವ.