ಪುಷ್ಯದಂಗಳದಲ್ಲಿ
ಪುಷ್ಯದಂಗಳದಲ್ಲಿ ನೆನಪು ಎಳೆಬಿಸಿಲಾಗಿ
ಶ್ವೇತರಾಗದ ಬೆಳಕ ಮನಕೆ ಹೊದ್ದಿಸಿದಾಗ,
ಪುಷ್ಪ ಪರಿಮಳದೊಡನೆ, ಪವನ ಪಲ್ಲವಿಯೊಡನೆ
ಗೀತಗಳ ಗರಿಯಲ್ಲಿ ಬಯಲಾದೆನು
ಕೆರೆಯ ತಾವರೆಯೊಳಗೆ ಸುರಿದ ಇಬ್ಬನಿಯಲ್ಲಿ
ಉಪ್ಪು ಕಡಲನು ಕಂಡು ಸವಿಗೆ ಹಾತೊರೆದಾಗ,
ಧರೆಯ ಬಿರು ಮಡಿಲೊಡನೆ, ಸುರಿವ ನಿಗಿ ಬಿಸಿಲೊಡನೆ,
ಹರಿದ ಹಗಲಿನ ಹಾಗೆ ಮುಗಿಲಾದೆನು
ಗಾನ ತನನದ ಬನದಿ, ಗುನುಗು ಮನದಿನಿಯನಲಿ
`ನನ್ನ ಮನಸಿನ ತಾನ ನೀನೆ'ಂದು ಬೆರೆತಾಗ,
ಬಾನು ಬಾನೊಳಗಾಗಿ, ಮಿಲನವನುಮಯವಾಗಿ
ಜವ್ವನದ ಜೀವನದ ಜೀವನದಿಯಾದೆನು
ಕನಸ ನೆಳಲಿನ ಬಯಲ, ಹುಲ್ಲು ಹಾಸಿಗೆಯಲ್ಲಿ
ಮನಸು ಹುಚ್ಚುಚ್ಚಾಗಿ ಅಲೆದು ಸತ್ತಾಗ,
ನೋವುಗಳ ಒಡಲೊಳಗೆ, ಸಾವು ಸವೆಯದ ಪರಿಗೆ
ಬದುಕಿನಲೆ ಸೆಳವೊಳಗೆ ಬರಿದಾದೆನು