ಪ್ರಯೋಗ
ಮೋಹವನ್ನು ಕಣ್ಣಿನಿಂದ ಕಿತ್ತು
ಕೈಯಲ್ಲಿ ಹಿಂಡಿ ಕಾಲಿನಿಂದ ಮೆಟ್ಟಿ
ಅದು ಸೀದಾ ನಿಮ್ಮ ತುಟಿಯಲ್ಲಿ
ಹಗೂರಾಗಿ ಕಂಡುಬರುತ್ತೆ
ಅಥವಾ
ದ್ವೇಷವನ್ನು ಉಸಿರಿನಿಂದ ಬೇರ್ಪಡಿಸಿ
ಕ್ಯಾಕರಿಸಿ ಉಗುಳಿ.
ಅದು ಸೀದಾ ನಿಮ್ಮ ಶ್ವಾಸಕೋಶಗಳಲ್ಲಿ
ಧುಸುಗುಡುತ್ತ ಕೂತಿರುತ್ತೆ.
ಅಥವಾ
ಪ್ರೀತಿಯನ್ನು ಅನಾಮತ್ತಾಗಿ ಎತ್ತಿ
ಪ್ರಪಾತಕ್ಕೆ ಒಗೆಯಿರಿ.
ಅದು ನಿಮ್ಮ ಬೆರಳುಗಳಲ್ಲಿ
ಝಮ್ಮೆಂದು ಕಾಣಬರುತ್ತೆ.
ನೀವು ಕರುಣೆಯನ್ನು ಹಣೆಗೆರೆಗಳಿಂದ ಕಿತ್ತರೂ,
ನೀವು ಅಸೂಯೆಯನ್ನು ಆಕಾಶಕ್ಕೆ ಉಡಾಯಿಸಿದರೂ,
ನೀವು ಬೇಸರವನ್ನು ಬಗೆದು ಬಗೆದು ತಿಂದರೂ,
ನೀವು ಆಕಳಿಕೆಯನ್ನು ಹೊರಗೆಳೆದು ಥಳಿಸಿದರೂ,
ಅವೆಲ್ಲ ಮರುಕಳಿಸಿ ಹೊಟ್ಟೆ ತೊಳಸುತ್ತೆ.
ಹೂತಿಟ್ಟರೂ ನೆನಪು ಎದ್ದುಬರುತ್ತೆ
ಹತ್ತಿಕ್ಕಿದರೂ ದುಃಖ ಧುಮ್ಮಿಕ್ಕುತ್ತೆ
ಯಾರಾದರೂ ಈ ಪ್ರಯೋಗ ಮಾಡಬಹುದು
ಪ್ರಯೋಗವೂ ಮತ್ತೆ ಮತ್ತೆ ಮರಳುತ್ತೆ.